ಶರಣರಿಂದ ‘ಮಾಚಿದೇವ’, ‘ಮಾಚಿತಂದೆ’ ಎಂದು ಕರೆಸಿಕೊಂಡ ಮಾಚಯ್ಯ ಅಪರೂಪದ ಶರಣ. ಸಾಹಿತ್ಯ ಚರಿತ್ರೆಕಾರರ ಪ್ರಕಾರ ಮಾಚಯ್ಯನ ಕಾಲ ಕ್ರಿ.ಶ. 1160 (1924ರ ಕರ್ನಾಟಕ ಕವಿಚರಿತ್ರೆ, ಸಂಪುಟ 1). ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ಕೆಂಪಾಂಬುಧಿ ಕೆರೆಯ ಪಕ್ಕ ನಿರ್ಮಿತವಾದ ಮಡಿವಾಳ ಮಾಚಿದೇವ ದೇವಸ್ಥಾನದಲ್ಲಿ ಪ್ರತಿವರ್ಷ ‘ಮಾಚಿದೇವ ಜಯಂತಿ’ಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಮಡಿವಾಳ ಮಾಚಯ್ಯನ ಬಗ್ಗೆ, ಸಂಸಾರದ ಬಗ್ಗೆ ಜನಪದ ಸಾಹಿತ್ಯ ಬಿಟ್ಟರೆ ಬೇರೆಡೆ ಉಲ್ಲೇಖಗಳಿಲ್ಲ. ಜನಪದ ಸಾಹಿತ್ಯದಲ್ಲಿ ಮಾಚಯ್ಯನ ಮಡದಿ ಮಲ್ಲಿಗಮ್ಮ ಎಂದೂ, ತನ್ನ ಪತಿಯ ಮಡಿ ಕಾಯಕದಲ್ಲಿ ನೆರವಾಗುವಲ್ಲಿ ತನ್ನನ್ನೇ ಅರ್ಪಿಸಿಕೊಂಡಳೆಂದೂ ಹೇಳಿದೆ.
ಯಳಂದೂರಿನ ಷಡಕ್ಷರದೇವ ‘ಆತ್ಮಪುರದಿಂದ ಕಲ್ಯಾಣಕ್ಕೆ ತಂದು’ ಎಂದು ತಿಳಿಸಿ ತರುವಾಯ ಆತನ ಗ್ರಾಮದ ಬಗ್ಗೆ ಮೌನ ತಾಳಿದ್ದಾನೆ. ಕರಸ್ಥಲದ ನಾಗಿದೇವ ಮಡಿವಾಳ ಮಾಚಿ ತಂದೆಗಳ ತಾರಾವಳಿಯಲ್ಲಿ ‘ಕನ್ನಡದ ಹಿಪ್ಪಲಿಯ ಪುರದೊಳು ಬಂದಿಳಿದನು’ ಎಂದೂ ‘ಧಾರುಣಿಗಧಿಕ ಹಿಪ್ಪಲಿಯ ಪುರದೊಳು ವೀರಶೈವಾಚಾರ ಕ್ರಿಯಾದಂಪತಿಗಳ ಮಗನಾಗಿ ಜನಿಸಿದ ಮಾಚಯ್ಯ’ ಎಂದೂ ತಿಳಿಸುತ್ತಾನೆ.
ಭೈರವೇಶ್ವರ ಕಾವ್ಯದ ‘ಕಥಾಮಣಿ ಸೂತ್ರ ರತ್ನಾಕರ’ದಲ್ಲಿ ವಸುಧೆಗಧಿಕಮಾಗಿಪ್ಪ ಹಿಪ್ಪಲಿಗೆಪುರದಲ್ಲಿ ವೀರ ಶೈವಾಚಾರ ದಂಪತಿಗಳು ರಜತಕಾಯಕದಿಂದಲವರಿಗೆ ಮಡಿವಾಳಯ್ಯ ಮಗನಾಗಿ ಜನಿಸಿದ’ ಎಂದು ತಿಳಿಸಿದೆ.
ಹಿಪ್ಪಲಿಗೆ ಪುರ ಈಗಿನ ಬಿಜಾಪುರ (ಆಗಿನ ವಿಜಯಪುರ) ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಹಿಪ್ಪರಿಗೆ ಗ್ರಾಮ. ದೇವರ ಹಿಪ್ಪರಿಗೆ ಎಂಬ ಹೆಸರೂ ಇದಕ್ಕಿದೆ. ಆ ಊರಿನ ಪ್ರಧಾನ ದೇವರು ಕಲಿದೇವರು.
‘ಹಿಪ್ಪರಗಿ ಮೆರೆಯುತಲಿ ಉಪ್ಪರಿಗೆ ಆಗೆಂದು/ ತುಪ್ಪದ ಹೊಳೆಯಾಗಿ ಹರಿಯುತಲಿ/ ಊರೊಳು/ ಅಪ್ಪ ಮಾಚಣ್ಣ ಜನಿಸಿದನು’ ಎಂದು ಮಾಚಯ್ಯ ಹಿಪ್ಪರಿಗೆಯಲ್ಲಿ ಜನಿಸಿದ ಬಗ್ಗೆ ಜನಪದ ಸಾಹಿತ್ಯದಲ್ಲಿ ಉಲ್ಲೇಖವಿದೆ. ‘ಶೂನ್ಯ ಸಂಪಾದನೆ’ಯಲ್ಲಿ ‘ಮಡಿವಾಳಯ್ಯಗಳ ಸಂಪಾದನೆ’ ಎಂಬ ಒಂದು ಅಧ್ಯಾಯವೇ ಇದೆ.
ವೃತ್ತಿಯಲ್ಲಿ ಫಲಾಪೇಕ್ಷೆ ಇಲ್ಲದ ಮಾಚಯ್ಯ ನಿರುದ್ಯೋಗಿಗಳ, ಭವಿಗಳ ಬಟ್ಟೆಯನ್ನು ಮುಟ್ಟುತ್ತಿರಲಿಲ್ಲವಂತೆ. ಬಸವಣ್ಣನ ಶುಭ್ರ ಶುದ್ಧ ಉಡುಗೆ ಕಂಡ ಬಿಜ್ಜಳ ಆ ಬಗ್ಗೆ ವಿಚಾರಿಸಿದಾಗ ಬಸವಣ್ಣ ಮಾಚಯ್ಯನ ಕಾಯಕ, ವೀರನಿಷ್ಠೆಗಳ ಬಗ್ಗೆ ತಿಳಿಸುತ್ತಾನೆ.
ಆತ ಸಾಮಾನ್ಯ ಅಗಸ ಅಲ್ಲ ಎಂದೂ ತಿಳಿಸುತ್ತಾನೆ. ‘ಅಗಸನಿಗೆ ಇಷ್ಟು ಅಹಂಕಾರವೆ?’ ಎಂದು ಗರ್ಜಿಸಿದ ಬಿಜ್ಜಳ ಮಾಚಯ್ಯನನ್ನು ನಾಶಮಾಡಲು ಜಟ್ಟಿಗಳನ್ನು, ಕುರುಡ ಕುಂಟರ ಪಡೆಯನ್ನು, ಪಟ್ಟದಾನೆಯನ್ನು ಕಳಿಸುತ್ತಾನೆ. ಅವರೆಲ್ಲ ಸೋತು, ಅಂಗವಿಕಲರು ಅಂಗಸೌಷ್ಠವರಾಗಿ ಮಾಚಿದೇವನಿಗೆ ನಮಿಸಿ ಹಿಂದಿರುಗುತ್ತಾರೆ. ಮಾಚಯ್ಯನ ದಿವ್ಯಶಕ್ತಿಯ ಅರಿವಾಗಿ ಬಿಜ್ಜಳ ‘ಮಾಚಯ್ಯ, ಕ್ಷಮಿಸು’ ಎನ್ನುತ್ತಾನೆ.
ಮಾಚಯ್ಯನ ಜೀವನ ಮೂರು ಪ್ರಸಂಗಗಳ ಕುರಿತು ವಿವರಗಳಿವೆ. ನುಲಿಯ ಚಂದಯ್ಯನಿಗೆ ಅರಿವು ಮೂಡಿಸಿದ ಪ್ರಸಂಗ ಅವುಗಳಲ್ಲೊಂದು. ‘ಬೇಡುವ ಭಕ್ತರಿಲ್ಲದೆ ಬಡವಾದೆ’ ಎಂದು ಬಸವಣ್ಣ ಉದ್ಗರಿಸಿದಾಗ ಮಾಚಯ್ಯ ಕೋಪಗೊಳ್ಳುವುದು, ‘ನಾನು ರಂಜಕ. ನೀವು ನಿರಂಜನರು. ತಪ್ಪನ್ನು ತಿದ್ದಬೇಕು’ ಎಂದು ಬಸವಣ್ಣ ಕೇಳುವುದು ಇನ್ನೊಂದು ಪ್ರಸಂಗ.
ಮೂರನೇ ಪ್ರಸಂಗ- ಮೇದರ ಕೇತಯ್ಯ ಲಿಂಗೈಕ್ಯನಾದಾಗ ಬಸವಣ್ಣ ಮಾಚಯ್ಯನಿಗೆ ಹೇಳಿ ಕಳುಹಿಸುತ್ತಾನೆ. ಪಡಿ ಹಾರಿ ಉತ್ತಣ್ಣ ವಿಷಯ ತಿಳಿಸಿದಾಗ, ‘ಶರಣ ದೇಹ ಬಿಟ್ಟಾಗ ತಾನುಳಿದಿದ್ದ ಭಂಗವನ್ನು ಹೊತ್ತ ಬಸವ ತಾದ್ರೋಹಿ, ಸಂಗವ ಬಿಟ್ಟೆವು, ಆತನ ಬಳಿಗೆ ಬಾರೆವು’ ಎಂದು ಮಾಚಯ್ಯ ಹೇಳಿ ಕಳಿಸುತ್ತಾನೆ. ಬಸವಣ್ಣನಿಗೆ ತಪ್ಪಿನರಿವಾಗಿ ‘ತನ್ನಸುವ ಹಿಂಗಿಸಿದ’. ಆಗ ಮಾಚಯ್ಯ ‘ಗಂಗಾಧರನೆ ಹೊರಗು ‘ಭಕ್ತ ಜನಕೆ’ ಎಂದಾಗ ಶಿವ ಅವರಿಬ್ಬರ ಅಸುವನ್ನು ಮರಳಿಸಿದ.
ಕಲ್ಯಾಣದಲ್ಲಿ ವಿಪ್ಲವ ಉಂಟಾದಾಗ ಶರಣರನ್ನು ವಚನಗಳನ್ನು ರಕ್ಷಿಸಿದವನು ಮಡಿವಾಳ ಮಾಚಯ್ಯ. ಗಲಭೆಯಲ್ಲಿ ಶರಣರೆಲ್ಲರನ್ನು ಉಳವಿಗೆ ಕಳುಹಿಸಿ, ಯುದ್ಧದಲ್ಲಿ ವೀರತ್ವ ಮೆರೆದವನು ಮಾಚಯ್ಯ. ‘ಮಾನವ ಜಾತಿಯಲ್ಲಿ ಉತ್ತಮ ಅಧಮರೆಂಬ ಭೇದವಿಲ್ಲ, ಎಲ್ಲರೂ ಒಂದೇ’ ಎಂಬುದನ್ನು ಮಾಚಯ್ಯ ತನ್ನ ವಚನಗಳಲ್ಲಿ ಬಿಂಬಿಸಿದ್ದಾನೆ.
ಈಗ ಲಭ್ಯವಾಗಿರುವ ಮಡಿವಾಳಯ್ಯನ ವಚನಗಳು 482. ಮಾಚಯ್ಯನನ್ನು ನಂತರದ ಕವಿಗಳು ಆತನನ್ನು ‘ಹರನ ಅಪರಾವತಾರ, ವೀರಭದ್ರಾವತಾರ’ ಎಂದು ಕರೆದಿದ್ದಾರೆ. ಆತನ ಬದುಕು- ಸಾಧನೆ ಕುರಿತಂತೆ ತೆಲುಗು ತಾಮ್ರಪಟಗಳು, ಕನ್ನಡ ಶಾಸನ, ವಿಗ್ರಹಗಳು ದೊರೆತಿವೆ.
ಮಾಚಯ್ಯನನ್ನು ಕುರಿತು ಬಸವಣ್ಣ ‘ಎನ್ನ ಕಾಯವ ಶುದ್ಧ ಮಾಡಿದಾತ ಮಡಿವಾಳ, ಎನ್ನ ಮನವ ಶುದ್ಧ ಮಾಡಿದಾತ ಮಡಿವಾಳ’ ಎಂದು ಬಣ್ಣಿಸಿದ್ದಾನೆ. ಆಧುನಿಕ ಜಗತ್ತಿನಲ್ಲಿ ಮಾಲಿನ್ಯಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ ಮಾಚಯ್ಯನ ನೆನಪು ಔಷಧಿಯಂತೆ ಕಾಣಿಸುತ್ತದೆ.